ಪದ್ಮನಾಭ 2 -
	ಸು. 1750 ಈ ಜೈನ ಕವಿ ಚಂದ್ರಶೇಖರ ಕವಿ ಕೃತ ರಾಮಚಂದ್ರಚರಿತದ ಉತ್ತರ ಭಾಗವನ್ನು (ಎಂದರೆ 17ನೆಯ ಸಂದಿಯಿಂದ ಮುಂದಕ್ಕೆ) ಬರದು ಗ್ರಂಥವನ್ನು ಪೂರ್ಣ ಮಾಡಿರುತ್ತಾನೆ. ತೌಳದೇಶದೊಳಗಣ ಮೂಲಿಕೆಯ ರಾಜನಾದ ಚೆನ್ನರಾಯ ಸಾಮಂತನ ಮತ್ತು ಆತನ ಸೋದರಮಾವನಾದ ಕುಂದರೈಯರಸನ ಇಷ್ಟಾನುಸಾರವಾಗಿ ವಾಗ್ವೇಣಿಪುರದ ಪದ್ಮಸೆಟ್ಟಿ ಪದ್ಮಾವತಿಯರ ಮಗನಾದ ಪದ್ಮನಾಭ ಈ ಗ್ರಂಥವನ್ನು ಪೂರ್ಣ ಮಾಡಿದ ವಿಚಾರ ಗ್ರಂಥದ ಕೊನೆಯಲ್ಲಿದೆ. ರಾಮಚಂದ್ರಚರಿತದಲ್ಲಿ ಮೂವತ್ತೇಳು ಸಂದಿ ಐದು ಸಾವಿರದ ಇನ್ನೂರ ಅರವತ್ತೆಂಟು ಪದ್ಯಗಳಿವೆ. ಅವುಗಳಲ್ಲಿ ಮೊದಲ ಎರಡು ಸಾವಿರದ ಒಂದನೂರ ಐವತ್ತೊಂದು ಚಂದ್ರಶೇಖರ (ಶಂಕರ) ಕವಿಕೃತ, ಉಳಿದವು ಪದ್ಮನಾಭ ಕವಿಕೃತ. ಈ ಗ್ರಂಥದಲ್ಲಿ 10ನೆಯ ತೀರ್ಥಂಕರನಾದ ಮುನಿಸುವ್ರತರ ಕಾಲದಲ್ಲಿ ಪ್ರತಿವಾಸುದೇವರಾದ ರಾಮ ಮತ್ತು ಲಕ್ಷ್ಮಣರ ಕಥೆಯನ್ನು ಜೈನ ಸಂಪ್ರದಾಯದ ರೀತಿಯಲ್ಲಿ ಹೇಳಿದೆ.       (ಎಂ.ಸಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ